ಕೀಲುಗಳ, ತಂತುಗಟ್ಟುಗಳ ರೋಗಗಳು ಮತ್ತು ಊನಗಳು

 ಕೀಲಿನಲ್ಲಿ ಎಲ್ಲಿ ರೋಗ ಹತ್ತಿದೆ, ಊನವಾಗಿದೆ ಎನ್ನುವದಕ್ಕೆ ತಕ್ಕಂತೆ ಇವುಗಳಿಗೆ ಬೇರೆ ಬೇರೆ ಹೆಸರುಗಳಿವೆ. ಕ್ಷಯ, ಕೀಲುವಾತ, ಉಪದಂಶ, ಪರಮಾ ರೋಗದಂತೆ ಗೊತ್ತಾದ ಕಾರಣಗಳಿದ್ದರೆ ಕೀಲುರಿತಕ್ಕೆ ಆಯಾ ರೋಗದ ಹೆಸರು ಬರುವುದು. ಉದಾಹರಣೆಯಾಗಿ, ಕೀಲಿನಲ್ಲಿ ಉರಿತಕ್ಕೀಡಾಗುವ ಒಂದು ಅಂಗಭಾಗವಾದ ಕೀಲೋಳು (ಸೈನೋವಿಯಲ್) ಪೊರೆಯ ಊತವೇ ಕೀಲೋಳುರಿತ (ಸೈನೊವೈಟಿಸ್). ಇಡೀ ಕೀಲಿನ ಎಲ್ಲ ಭಾಗಗಳ ಉರಿತವೇ ಕೀಲುರಿತ (ಅರ್‍ತ್ರೈಟಿಸ್) ಮೂಳೆಯಲ್ಲಿ ಮುಖ್ಯವಾಗಿ ಉರಿತ ಹೆಚ್ಚಾಗಿದ್ದರೆ, ಎಲುಗೀಲುರಿತ (ಆಸ್ಟಿಯೊ ಅರ್‍ತ್ರೈಟಿಸ್) ಆಗುವುದು. ಕೀಲು ಕ್ಷಯದ ತೆರನ ವಿಶೇಷವನ್ನು ಬಿಟ್ಟು ಕೀಲುಗಳ, ತಂತುಗಟ್ಟುಗಳ ಉಳಿದೆಲ್ಲ ರೋಗ ಊನಗಳನ್ನು ಇಲ್ಲಿ ಹೇಳಿದೆ.

 ಹುಟ್ಟಿನಿಂದ ಬರುವ ಕುಂದುಗಳು: ಗರ್ಭದಲ್ಲಿ ಬೆಳೆವಾಗ ಪಿಂಡದ ವಿಕಾಸ ಕೆಟ್ಟರೆ, ಪಿಂಡಕಣ ರಸದಲ್ಲಿ (ಜರ್ಮ್‍ಪ್ಲಾಸಂ) ಕುಂದಿದ್ದರೆ, ಕೀಲುಗಳು ಇಲ್ಲವಾಗಬಹುದು. ಒಂದಕ್ಕೊಂದು ಅಂಟಿರಬಹುದು. ತೀರ ಸೊಟ್ಟಪಟ್ಟನಾಗಿರಬಹುದು. ಕೀಲಿನ ಒಂದೋ ಎರಡೋ ಮೂಳೆಗಳು ಇಲ್ಲವಾಗಬಹುದು, ಎರಡೋ ಹೆಚ್ಚೋ ಮೂಳೆಗಳಿದ್ದು ಅಂಟಿರಬಹುದು. ಸರಿಯಾಗಿ ಬೆಳೆಯದ ಕೀಲುಗಳು ಜಾಗತಪ್ಪಿರಬಹುದು. ಸೊಂಟದ ಕೀಲುಗಳಲ್ಲಿ ಹೀಗಾಗುವುದು ಸಾಮಾನ್ಯ. ನುಲಿಗೊರಳು (ರೈನೆಕ್), ಲಟ್ಟಪಾದ (ಕ್ಲಬ್ ಪುಟ್), ಲಟ್ಟಗೈ (ಕ್ಲಬ್ ಹ್ಯಾಂಡ್) ಇವುಗಳಲ್ಲಿದ್ದ ಹಾಗೆ. ಸ್ನಾಯುಗಳ ಸಮತೋಲ ಕೆಟ್ಟರೆ ಇಡೀ ಅವಯವವೇ ಸೊಟ್ಟನಾಗಬಹುದು.

 ಎಲುಗುಂದಣದಲ್ಲಿ (ಅಸಿಟ್ಯಾಬ್ಯುಲಂ) ತೊಡೆಯಮೂಳೆಯ ದುಂಡು ತಲೆ, ಹುಟ್ಟುವ ಮೊದಲೋ ಹೆರಿಗೆಯಲ್ಲೋ ಆಮೇಲೋ ಇಲ್ಲವಾದರೆ ಚಪ್ಪೆ ಕೀಲ್ತಪ್ಪಿಕೆ ಹುಟ್ಟಾ ಬಂದದ್ದು-ಎನಿಸಿಕೊಳ್ಳುತ್ತದೆ. ಹೀಗಾಗುವುದರ ಕಾರಣ ಗೊತ್ತಿಲ್ಲ. ಹೀಗಾಗುವುದು ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಲ್ಲಿ 5 ಪಟ್ಟು ಹೆಚ್ಚು. ಇದನ್ನು ಗುರುತಿಸುವುದು ಸುಲಭ: ಪಿರ್ರೆಗಳೂ ಕಾಲುಗಳೂ ಅಸಮವಾಗಿದ್ದು ಸೊಂಟಗೀಲಿನ ಚಲನೆಯಲ್ಲಿ ಹಿಡಿತ ಕಂಡುಬರುತ್ತದೆ. ಕುಳಿತು ತೊಡೆಗಳನ್ನು ಅಗಲಿಸವುದಾಗದು. ಎಕ್ಸ್ ಕಿರಣ ಚಿತ್ರದಲ್ಲಿ ಕೀಲನ್ನು ಕಂಡಾಗ ತೊಡೆಮೂಳೆಯ ತಲೆಯಲ್ಲಿ ಮೂಳೆ ಬೆಳೆಯದೆ ತಲೆ ಭಾಗ ಮೇಲಕ್ಕೆ ಜರುಗಿದ್ದು ಎಲುಗುಂದಣದ ಆಳ ಕಡಿಮೆಯಾಗಿರುವುದು ತೋರುತ್ತದೆ. ಹಸುಗೂಸಿನಲ್ಲಿ ಈ ಕೀಲನ್ನು ಎಂದಿನಂತೆ ಕೂರಿಸಿ ಮುಂದೆ ಕೀಲು ಸೊಟ್ಟವಾಗದಂತೆ ತಪ್ಪಿಸುವುದು ಕಷ್ಟ. ಎಷ್ಟೋ ಮಕ್ಕಳಲ್ಲಿ ಕೀಲು ಚೆನ್ನಾಗಿ ಕೂಡಿದ್ದರೂ ಅದರ ಕುಳಿ ಆಳವಿಲ್ಲದ್ದಾಗಿರುತ್ತದೆ. ಆಗ ಇದನ್ನು ಸುಮ್ಮನೆ 6 ತಿಂಗಳಕಾಲ ತೊಡೆಗಳನ್ನು ಅಗಲಿಸಿಡುವ ದಬ್ಬೆ ಕಟ್ಟುಗಳನ್ನು (ಸ್ಪ್ಲ್ಲಿಂಟ್) ಹಾಕಿದರೆ ಸಾಕು. ಕೀಲುಗಳ ಮತ್ತವುಗಳ ತಂತುಗಟ್ಟುಗಳ ಹುಟ್ಟಿನಿಂದ ಬರುವ ಕೀಲ್ತಪ್ಪಿಕೆಗಳೂ (ಡಿಸ್ಲೊಕೇಷನ್ಸ್) ಸೊಟ್ಟುಗಳೂ ಸಾಮಾನ್ಯವಾಗಿ ಒಂದು ಅವಯವದಲ್ಲಿ ಒಂದೆಡೆ ಮಾತ್ರ ಕಾಣಿಸಿಕೊಳ್ಳುತ್ತವೆ. ಇಡೀ ಮೈಯಲ್ಲಿನ ಎಲ್ಲ ಕೀಲುಗಳೂ ತಂತುಗಟ್ಟುಗಳೂ ಹಿಗ್ಗದಂತಾಗಿ ಅಡ್ಡಾದಿಡ್ಡಿಯಾಗಿ ಬಿಗಿತುಕೊಂಡಿರುವುದು ಬಲು ವಿರಳ.

 ಪೆಟ್ಟುಗಳು : ಬಿದ್ದ ಪೆಟ್ಟಿನ ತೀವ್ರತೆಗೆ ಅನುಗುಣವಾಗಿ ಬಗೆಬಗೆಯ ಊನಗಳು ಸೊಟ್ಟುಗಳು ಆಗುತ್ತವೆ. ಕೀಲಿನ ಭಾಗಗಳಿಗೆ ನೇರವಾಗಿ ಪೆಟ್ಟಾಗಬಹುದು ಇಲ್ಲವೇ ಕೀಲಿನಲ್ಲಿ ಸೋಂಕು ಸೇರಬಹುದು; ಕೀಲುರಿತ ಆಗಬಹುದು. ಕೀಲೋಳಿನ ಚೀಲಕ್ಕೆ ಪೆಟ್ಟು ಬಿದ್ದರೆ ಮಂದದ್ರವ ಹೊರಗೆ ಜಿನುಗುತ್ತದೆ. ಒಂಟಿ ತಂತು ಗಟ್ಟು ಹಿಗ್ಗಿ ಹರಿದುದರಿಂದಾಗುವ ಉಳುಕುಗಳು ಯಾವ ತೊಡಕೂ ಇಲ್ಲದೆ 6 ವಾರಗಳೊಳಗಾಗಿ ವಾಸಿಯಾಗುತ್ತವೆ. ಮಂಡಿಯಂಥ ದೊಡ್ಡ ಕೀಲಿನ ಸುತ್ತನ ಹಲವು ತಂತುಗಟ್ಟುಗಳು ಹರಿದರೆ, ಹರಡಿನ (ಆಂಕ್ಲ್) ಸುತ್ತ ಇರುವಂಥ ಸಣ್ಣ ತಂತುಗಟ್ಟುಗಳು ಮೇಲಿಂದ ಮೇಲೆ ಹರಿದು ಉಳುಕುಗಳಾದರೆ, ಕೀಲಿಗೆ ಬೇರೂರಿದಂತೆ ಊನವಾಗುವುದು. ಕಾಲ್ಚೆಂಡಾಟಗಳಲ್ಲಿ ಹಲವೇಳೆ ತಂತುಗಟ್ಟುಗಳಿಗೆ ಪೆಟ್ಟಾಗಿ ಅವು ತಿರುಚಿಕೊಳ್ಳುತ್ತವೆ. ಈ ಪೆಟ್ಟು, ಗಾಯ ಕೀಲಿನೊಳಕ್ಕೂ ತಾಕಿ ಕೀಲ್ಗೂಡಿಸುವ ಮೆಲ್ಲೆಲುಬಿನ ಚಂದ್ರಬಟ್ಟುಗಳನ್ನು (ಮೆನಿಸ್ಕೈ) ಹಾಳುಮಾಡಿ, ಕೀಲು ಬೀಗಹಾಕಿದಂತಾಗುತ್ತದೆ. ಹರಿದ ಮೆಲ್ಲೆಲುಬನ್ನು ಶಸ್ತ್ರಕ್ರಿಯೆಯಿಂದ ಕೊಯ್ತೆಗೆಯಬೇಕಾಗಬಹುದು. ಮಂಡಿಗೆ ಬಲವಾಗಿ ತಾಕಿದ ಪೆಟ್ಟು ತೊಡೆಮೂಳೆ ಮೂಲಕ ಹೋಗಿ ಚಪ್ಪೆ ಕೀಲು ತಪ್ಪಿಸಬಹುದು ಹಾಗೇ ಚಪ್ಪೆಗೀಲಿನ ಕುಳಿಯ ಹಿಂದಣ ತುಟಿ ಮುರಿಯಲೂಬಹುದು.

 ಉಳುಕುಗಳಲ್ಲಿ ತಂತುಗಟ್ಟುಗಳು ಬಲವಾಗಿ ಕಿತ್ತಂತಾಗಿ ಕೀಲಿನ ಒಳಗೂ ಸುತ್ತಲೂ ರಕ್ತ ಸುರಿವುದು. ಕೆಲವೇಳೆ ಕಂಡರಗಳೂ ಕೀಲ್ತಪ್ಪುವುವು. ಉಳುಕಿನ ಭಾಗ ಕೂಡಲೇ ಊದಿ ಅಲುಗಾಡಿಸಿದರೆ ನೋಯುತ್ತದೆ. ಕೀಲಿನ ಎಲುಬು ಮುರಿದ ಹಾಗೇ ಹೊರಗಾಣುತ್ತದೆ. ಮುಂದೆ ಕಿಲೋಳುರಿತ ಆಗುವುದನ್ನು ತಪ್ಪಿಸಲು, ಕೀಲುಗಳನ್ನು ಕೊಂಚವೂ ಅಲುಗಾಡದಂತೆ ಇರಿಸಿರಬೇಕು. ಆಮೇಲೆ ಊತ ಇಳಿವ ತನಕ ಹಿಗ್ಗುಪಟ್ಟಿ ಸುತ್ತಬೇಕು.

 ಕೀಲೊಳಗಡೆ ಕೀಲೋಳಿನ ದ್ರವದೊಂದಿಗೆ ರಕ್ತಗೂಡಿದ್ದರೆ ರಕ್ತಗೀಲುವೆ (ಹೀಮೊತ್ರ್ರೋಸಿಸ್) ಆಗುತ್ತದೆ. ಹೀಗಾದಾಗ ತಂತುಗಟ್ಟುಗಳಿಗೂ ಕೀಲಿನ ಮೇಲ್ಮೈಗಳಿಗೂ ಪೆಟ್ಟಾಗುವುದು. ಕೀಲೊಳಗಡೆ ರಕ್ತಗರಣಿರೋಧಕ ವಸ್ತುಗಳು ಇರುವುದರಿಂದ ಕೀಲೊಳಗೆ ಸುರಿದ ರಕ್ತ ಹೆಪ್ಪುಗಟ್ಟದು. ಮಂಡಿ ಕೀಲಿನಲ್ಲಿ ಹೀಗೆ ಸೇರುವ ದ್ರವ 30 ಮಿಲೀ. ಮೀರಬಹುದು. ಆಗ ನೋವಿಳಿಸಲು ಅದನ್ನು ತೆಗೆದುಹಾಕಬೇಕಾಗಬಹುದು. ಕುಸುಮರೋಗದಲ್ಲೂ (ಹೀಮೊಫಿಲಿಯ) ಹೀಗಾಗಬಹುದು.

 ಕೀಲಿನ ಮೂಳೆ ಸವೆದುಹೋಗಿ. ಕೀಲುಸುತ್ತಣ ತಂತುಗಟ್ಟುಗಳೂ ಕೀಲೋಳು ಪೊರೆಯೂ ಒಂದಕ್ಕೊಂದು ಅಂಟಿಕೊಳ್ಳುವುದನ್ನು ತಪ್ಪಿಸಲು, ಬೆಳೆದವರಲ್ಲಿ ಮೂಳೆಗಳನ್ನು ಗಚ್ಚಿನ ಅಚ್ಚುಗಳು (ಕ್ಯಾಸ್ಟಸ್), ಹಿಡಿಕಟ್ಟುಗಳಲ್ಲಿ (ಬ್ರೇಸಸ್) ಬಹಳ ಕಾಲ ಅಲುಗಾಡದಂತೆ ಇರಿಸದ ಹಾಗೆ ನೋಡಿಕೊಳ್ಳಬೇಕು.

 ಸೋಂಕು, ರೋಗ: ಕೀಲಿನ ತೆರೆದಿರುವ ಗಾಯ, ಪೆಟ್ಟು ಹುಣ್ಣುಗಳಲ್ಲಿ ತಂತುಗಟ್ಟು ಮತ್ತು ಕೀಲುಗಳಲ್ಲಿ ಏಕಾಣುಜೀವಿ ಸೋಂಕುಗಳು ಹತ್ತಬಹುದು. ಬೇಟೆ, ಕದನಗಳಲ್ಲಿ ಆಕಸ್ಮಿಕಗಳಲ್ಲಿ ತೀವ್ರವಾದ ಸೋಂಕುಗಳು ಹತ್ತಲು ಮದ್ದು ಗುಂಡುಗಳು, ಸಿಡಿಮದ್ದಿನ ಕೊಳವೆ ಚೂರುಗಳೊಂದಿಗೆ ಕೊಳಕು ಅರಿವೆ ಚಿಂದಿಗಳು ಹಲವೇಳೆ ಕಾರಣವಾಗುತ್ತವೆ. ಕೆಟ್ಟು ಹಾಳಾಗಿರುವ ಭಾಗಗಳನ್ನು ಕೂಡಲೇ ಕತ್ತರಿಸಿ ತೆಗೆದುಹಾಕಿ, ಸೋಂಕಾಗಿ ರಕ್ತದ ಹರವಿಗೆ ಕೀವುಜನಿಕ ಜೀವಾಣುಗಳು ಸೇರದಂತೆ ಜೀವಿರೋಧಕಗಳನ್ನು ನೀಡುವುದೇ ಇದರ ಚಿಕಿತ್ಸೆ. ಏಕಾಣುಜೀವಿಗಳ ಸೋಂಕುಗಳು, ಪರಮಾ (ಗೊನೋರಿಯ), ವಿಷಮಶೀತಜ್ವರ, ಮತ್ತಿತರ ರೋಗಗಳಲ್ಲಿ ರಕ್ತದ ಮೂಲಕ ಕೀಲುಗಳಿಗೂ ಹರಡಿ ನೆಲೆಸುತ್ತದೆ.

 ಉಪದಂಶ (ಸಿಫಿಲಿಸ್), ಮe್ಞÁನಾಳಿಕೆ (ಸಿರಿಂಗೊಮಯೀಲಿಯ), ಧಮನಿ ಪೆಡಸಣೆಯಂಥ (ಆರ್ಟೀರಿಯೊಸ್ಕ್ಲೀರೋಸಿಸ್) ಕೇಂದ್ರನರಮಂಡಲದ ರೋಗಗಳಿಂದ ಸಾಮಾನ್ಯವಾಗಿ ತಂತುಗಟ್ಟು ಮತ್ತು ಕೀಲಿನ ಮೇಲ್ಮೈಗಳನ್ನು ಕಾಪಿಡುವ ನೋವು ಕೀಲಿನ ಭಂಗಿಯ ಅರಿವೂ ಹಾಳಾಗುತ್ತದೆ. ಇದರಿಂದ ನರಬೇನೆಯ ಇಲ್ಲವೇ ಷಾರ್ಕೋನ ಕೀಲಾಗುತ್ತದೆ. ಹೀಗಾದಾಗ, ಕೀಲು ನೋವಿಲ್ಲದೆ ಊದಿಕೊಂಡು ತಂತುಗಟ್ಟುಗಳೂ ಕೀಲಿನ ಮೇಲ್ಮೈಗಳೂ ಹೇಗೋ ಏಕೋ ಹಾಳಾಗುತ್ತವೆ. ಇಂಥ ಕೀಲು ನೆಲೆದಪ್ಪುತ್ತದೆ; ಇಲ್ಲವೇ ಅದಕ್ಕದೇ ಕಿತ್ತುಬರುತ್ತದೆ. ಎಳೆಯದರಲ್ಲೇ ಗುರುತಿಸಿ ಕೀಲ್ಗಟ್ಟಿಸುವ ಶಸ್ತ್ರಕ್ರಿಯೆ ಕೈಗೊಂಡರೆ ಲೇಸು.

 ಮುಖ್ಯವಾಗಿ 20-40 ವಯಸ್ಸಿನ ಗಂಡಸರಲ್ಲಿ, ಕೀಲುಗಳನ್ನೂ ತಂತುಗಟ್ಟುಗಳನ್ನೂ ಬಹಳ ಊನಗೊಳಿಸುವ ಬೇನೆಯೆಂದರೆ ಗಡಸುಗಟ್ಟುವ ಬೆನ್ನೆಲುಗೀಲುರಿತ (ಆಂಕಿಲೋಸಿಂಗ ಸ್ಟಾಂಡಿಲೈಟಿಸ್). ಇದಕ್ಕೆ ಕಾರಣ ಗೊತ್ತಿಲ್ಲ; ಸರಿಯಾದ ಚಿಕಿತ್ಸೆಯಂತೂ ಇಲ್ಲ. ಕೂಡಿಸುವ ಬೇರೂರಿದ ಉರಿತದ ಬೇನೆಯಾದ ಡುಪುಟ್ರೆನ್ನನ ಚಿರಸೆಳೆತ (ಕಂಟ್ರಾಕ್ಚರ್) ಇನ್ನೊಂದು ಬಗೆಯದು. ಕಿರುಬೆರಳು, ಉಂಗುರ ಬೆರಳುಗಳ ನಡುವಣ ಅಂಗೈಯಲ್ಲೂ ಅಂಗಾಲುಗಳಲ್ಲೂ ಇದು ತಲೆದೋರುತ್ತದೆ. ಕೆಲವರಲ್ಲಿ ತಲೆಮಾರಿನ ಗುಣವಿದ್ದರೂ ನಿಜವಾದ ಕಾರಣ ಗೊತ್ತಿಲ್ಲ. ಬಿಗುವಾಗಿರುವ ಅಂಗೈಯ ದಡಗಟ್ಟನ್ನು (ಫೇಸಿóಯ) ಕೊಂಯ್ತೆಗೆಯುವುದೇ ಇದರ ಚಿಕಿತ್ಸೆ.

 ಕೀಲಿನ ಮೂಳೆಯಿಂದ ಹರಡಿಕೊಂಡೋ ಗಾಯ ಪೆಟ್ಟುಗಳಿಂದಲೋ ಮೈಯಲ್ಲಿ ಬೇರೆ ರೋಗಗಳಿದ್ದರೋ ಕೀಲುರಿತ ಆಗುತ್ತದೆ. ಕೀಲು ಕೆಂಪಗೆ ಊದಿಕೊಂಡು ಬಲು ನೋಯುತ್ತದೆ. ಮೈಯಲ್ಲೆಲ್ಲ ಜ್ವರ ಬಂದ ಹಾಗಿರುವುದು. ವಿಷವೇನಾದರೂ ಜೋರಾಗಿದ್ದರೆ, ಕೀಲಿನೊಳಗೆ ಕೀವಾಡುತ್ತದೆ. ಆಗ ಕೀಲು ಊದಿಕೊಂಡು ಉಬ್ಬಿ ದೊಡ್ಡದಾಗಿರುವುದು. ಇದಕ್ಕೆ ಬೇಗನೆ ಚಿಕಿತ್ಸೆ ಆಗಬೇಕು. ಕೀಲನ್ನು ಕೊಯ್ದು ಕೀವನ್ನು ಹೊರಡಿಸಿ, ಒಳಗೆಲ್ಲ ಚೆನ್ನಾಗಿ ಚೊಕ್ಕವಾಗಿ ತೊಳೆದರೆ ಸಾಕಾಗಬಹುದು. ಇಲ್ಲವೇ ಕೆಲವೇಳೆ ಅವಯವವನ್ನೇ ಬಲಿಕೊಡಬೇಕಾಗಬಹುದು.

 ಮೈಯಲ್ಲಿನ ಕೆಲವು ಭಾಗಗಳು ಒಂದನ್ನೊಂದು ಉಜ್ಜುವೆಡೆಗಳಲ್ಲಿ ರಸಿಕೆ ತುಂಬಿದ ಚೀಲವಾದ, ದಿಂಚೀಲದ (ಬರ್ಸ್) ಉರಿತವೇ ದಿಂಚೀಲುರಿತ (ಬರ್ಸೈಟಿಸ್). ಸಾಮಾನ್ಯವಾಗಿ ದಿಂಚೀಲಗಳು ಹೆಗಲು, ಮೊಣಕೈ, ಮಂಡಿ, ಸೋಂಟ, ಅಕಿಲಸನ ಕಂಡರಗಳಲ್ಲಿ ಇರುತ್ತವೆ. ದಿಂಚೀಲುರಿತದಲ್ಲಿ ಕೀಲನ್ನೋ ಸ್ನಾಯುವನ್ನೋ ಆಡಿಸಿದಾಗ ನೋವೂ ಆಗಿ ಕೆಲವೇಳೆ ಒಳಗಡೆ ನೀರೂ ಸೇರಿರುವುದು.

 ಎಲುಮುರುಟು (ರಿಕೆಟ್ಸ್) ರೋಗದ ಮಕ್ಕಳು ಹೆಜ್ಜೆಯಿಡಲು ತೊಡಗಿದಾಗ ಕಾಲಿನ ಮಂಡಿಗಳು ಒಂದಕ್ಕೊಂದು ತಾಕುವಷ್ಟು ಒಳಕ್ಕೆ ಬಾಗಿ ತಾಗುಮಂಡಿ (ನಾಕನೀ) ಆಗುತ್ತದೆ. ಮಂಡಿ ಕೀಲಿನ ಮೂಳೆಗಳು ಸೊಟ್ಟವಾಗಿ ಬೆಳೆವುದೇ ಇದರ ಕಾರಣ. ಎಳೆಯದರಲ್ಲಿ ದಬ್ಬೆಕಟ್ಟುಗಳು ಹಿಡಿಕಟ್ಟುಗಳನ್ನು ಕಟ್ಟಿಡುವದರಿಂದ ಇದನ್ನು ತಪ್ಪಿಸಬಹುದು. ಆದರೆ ಮೂಳೆಗಳು ಬೆಳೆದು ನಿಂತು ಗಡುಸಾಗಿ ಬಿಟ್ಟಮೇಲೆ ಮಂಡಿಕೀಲಿನ ಮೂಳೆಗಳ ಕೊನೆಗಳನ್ನು ಕತ್ತರಿಸಿ ಒಂದಕ್ಕೊಂದು ನೆಟ್ಟಗೆ ಕೂಡಿಕೊಳ್ಳುವ ತನಕ ಗಚ್ಚಿನ ಅಚ್ಚಿನಲ್ಲಿ ಇಡಬೇಕಾಗಬಹುದು.     (ನೋಡಿ- ಎಲು-ಮುರುಟು)

 ಗಂತಿಗಳು : ತಂತುಗಟ್ಟುಗಳಲ್ಲಿ ಗಂತಿಗಳು ಏಳುವುದೇ ಇಲ್ಲ. ಆದರೆ ಕೀಲಿನ ಕವಚದಲ್ಲಿ ಸೇರಿರುವ ತಂತುಗಳಲ್ಲಿ ಮಾತ್ರ ಜಿಟ್ಟಿಯ ಅನುವಳಿಕೆ (ಸಿಸ್ಟಿಕ್ ಡೀಜನ ರೇಷನ್) ಆಗಬಹುದು. ಹೀಗಾಗಿರುವುದಕ್ಕೆ ಸಾಧಾರಣವಾಗಿ ಕೀಲೋಳ್ಗಂತಿ (ಗ್ಯಾಂಗ್ಲಿಯಾನ್) ಎನ್ನುವುದುಂಟು. ಇದರಲ್ಲಿ ತಂತುವಿನ ಊತಕದ ಚೀಲದಲ್ಲಿ ತಿಳಿಯಾದ ಗಿಜಿ ತೆರನ ದ್ರವ ಇರುತ್ತದೆ; ಮಣಿಕಟ್ಟು ಪಾದಗಳ ನಡುವೆ ಇದು ಸಾಮಾನ್ಯ. ಇವುಗಳಿಂದ ತೊಂದರೆ ಇಲ್ಲ. ಕೀಲುಗಳಲ್ಲೂ ಅವುಗಳ ಸುತ್ತಲೂ ಹಳಗಂತಿ (ಜಾóಂತೋಮ), ತಂತುಗಂತಿ (ಫೈಬ್ರೋಮ), ರಕ್ತನಾಳಗಂತಿ (ಹಿಮ್ಯಾಂಜಿ ಯೊಮ), ತಂತುಮಾಂಸಗಂತಿ (ಫೈಬ್ರೊಸಾರ್ಕೋಮ), ಮತ್ತಿತರ ಬಗೆಗಳ ಮೆಲುಪಿನ (ಬಿನೈನ್), ವಿಷಮ (ಮೆಲಿಗ್ನೆಂಟ್) ಗಂತಿಗಳು ಏಳಬಹುದು.

 ಕಟ್ಟುವಾರೆ (ಗೌಟ) ತೆರನ ಕೆಲವು ಜೀವವಸ್ತುಕರಣದ (ಮೆಟಬಾಲಿಕ್) ಬೇನೆಗಳಲ್ಲಿ ಗಂತಿ ತೆರನ ಊತಗಳೆದ್ದರೂ ಅವು ವಿಷಮ ಗಂತಿಗಳಲ್ಲ. ಕೀಲುಗೂಡಿಸುವ ಮೆಲ್ಲೆಲುಬಿನ ಇಲ್ಲವೇ ಕೀಲೋಳಿನ ಎಳೆಗೊಂಡೆಗಳ (ವಿಲ್ಲೈ) ಎಲುಮೆಲ್ಲೆಲುಬಿನ (ಆಸ್ಟಿಯೊಕಾರ್ಟಿಲೇಜಿನಸ್) ಗಂತಿಗಳಿಂದ ಬಂದ ಬಿಡಿ ಚೂರುಗಳು ಕೀಲಿನ ದ್ರವದಲ್ಲಿ ಹುಲುಸಾಗಿ ಬೆಳೆಯುತ್ತವೆ. ಇವಕ್ಕೆ ಕೀಲಿನ ಚಿಟ್ಟಲಿಗಳು ಎನ್ನುವುದುಂಟು ಎಲುಬುಗಳ ನಡುವೆ ಮೆಲ್ಲೆಲುಬು ಸಿಕ್ಕಿಕೊಂಡು ಚೂರಾಗುವದರಿಂದ ಮಂಡಿಕೀಲಿನಲ್ಲಿ ತೇಲುವ ಮೆಲ್ಲೆಲುಬುಗಳು ಮುಖ್ಯವಾಗಿ ಕಾಣಬರುತ್ತವೆ. ಕೀಲೋಳಿನ ಚೀಲದಲ್ಲಿ ಈ ಚೂರುಗಳು ತೇಲಾಡುತ್ತ ಕೀಲು ಬೀಗ ಹಾಕಿದಂತೆ ಸಿಕ್ಕಿಹಾಕಿಕೊಳ್ಳಲು ಕಾರಣವಾಗುತ್ತವೆ. ಹೀಗಾದಾಗ ರೋಗಿ ಇದ್ದಕ್ಕಿದ್ದ ಹಾಗೆ ಕುಸಿದು ಬೀಳುತ್ತಾನೆ. ಮಂಡಿಕೀಲು ವಿಪರೀತ ನೋವಿಡುತ್ತದೆ. ಕೀಲೋರಿನ ಪೊರೆಗೆ ಪೆಟ್ಟಾಗಿ ಕೊಂಚ ಉರಿತವಾಗಿರುತ್ತದೆ. ಈ ಚೂರುಗಳನ್ನು ಕೆಲವೇಳೆ ಚರ್ಮದ ಮೂಲಕ ಮುಟ್ಟಿ ತಿಳಿದು ಹಿಡಿಯಲೂಬಹುದು. ಹೀಗೆ ಹಿಡಿದುಕೊಂಡು ಶಸ್ತ್ರಕ್ರಿಯೆಯಿಂದ ಹೊರತೆಗೆಯಬಹುದು. ಆದರೆ ಆಗಾಗ್ಗೆ ನೋವಾಗಿ ತೊಂದರೆಕೊಟ್ಟರೆ ಕೀಲನ್ನು ಕೊಯ್ದು ಅವನ್ನು ಹುಡುಕಿ ಹೊರತೆಗೆಯಬೇಕು. (ನೋಡಿ- ಉಳುಕು-(ಸೆಳೆತ))

ಕೀಲಿನಲ್ಲೋ ಅದರ ಸಂಬಂಧವಾಗೋ ಬೆಳೆದ ಕೀಲೋಳಿನ ಮಾಂಸಗಂತಿ ಬಲು ಅಪೂರ್ವ. ಬಲುಬೇಗನೆ ಇದು ರಕ್ತದ ಮೂಲಕ ಪುಪ್ಪುಸಗಳಿಗೆ ಹರಡಿ ನೆಲೆಸುವುದು. ಜೀವುಂಡಿಗೆಯಿಂದ (ಬಯಾಪ್ಸಿ) ಮಾತ್ರ ಗುರುತಿಸಬಹುದಾದ್ದರಿಂದ ಅದನ್ನು ಬೇಗನೆ ಮಾಡಿ ಕಂಡುಕೊಳ್ಳಬೇಕು. ಪುಪ್ಪ್ಪುಸಗಳಿಗೆ ಹರಡಿಲ್ಲವಾದರೆ ಏಡಿಗಂತಿರೋಧಕ ಮದ್ದುಗಳನ್ನು ಅವಯವಕ್ಕೆ ರಕ್ತದಲ್ಲಿ ಸೇರಿಸುವುದು, ವಿಕಿರಣ ರೋಗ ಚಿಕಿತ್ಸೆ (ರೇಡಿಯೊತೆರಪಿ). ಇಡೀ ಅಂಗ ತೆಗೆವುದೇ ಮುಂತಾದವು ಇದರ ಚಿಕಿತ್ಸೆ. 

(ನೋಡಿ- ಎಲುಬಿನ-ರೋಗಗಳು,-ಗಾಯಗಳು)

(ನೋಡಿ- ಎಲುಮುರಿಕೆಗಳು,-ಕೀಲ್ತಪ್ಪಿಕೆಗಳು)

(ನೋಡಿ- ಎಲುನೇರ್ಪಿಕ-ಶಸ್ತ್ರವೈದ್ಯ-(ಅಸ್ಥಿ-ಶಾಸ್ತ್ರ)) 

(ನೋಡಿ- ಕಟ್ಟುವಾರೆ)

 

(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ